Powered By Blogger

ಇಲ್ಲಿ ಕ್ಲಿಕ್ ಮಾಡಿ

Thursday, October 27, 2011

ನನ್ನ ಜಗತ್ತು...!

ಸೊಗಸಾದ ನೈದಿಲೆ ಹೂಗಳ ಒಂದು ಗುಚ್ಚವನ್ನು ತಯಾರಿಸಿ ಹೂದಾನಿಯಲ್ಲಿ ಇರಿಸಬಹುದು. ಆದರೆ ಒಂದು ದಿನದೊಳಗೆ ಅವು ಬಾಡುತ್ತವೆ. ನೈದಿಲೆ ಹೂಗಳ ಒಂದು ಹಾರವನ್ನೂ ಹೆಣೆಯಬಹುದು. ಆಗ ಅವು ಇನ್ನೂ ಬೇಗ ಬಾಡುತ್ತವೆ. ಎಲ್ಲಿರುತ್ತವೋ ಅಲ್ಲಿಯೇ ಬಿಟ್ಟರೆ ಅವು ಇಡೀ ಬೇಸಿಗೆ ಕಾಲ ಕಣ್ಣುಗಳಿಗೆ ಹಬ್ಬ ನೀಡುತ್ತವೆ.

ಮನಸ್ಸಿನಲ್ಲಿನ ಮಧುರ ನೆನಪುಗಳು ಕೂಡ ಹಾಗೆಯೇ…! ಅವುಗಳನ್ನು ಹೊರ ಹಾಕಿದರೆ ಮಾಸಿ ಹೋಗುತ್ತವೆ. ಯಾರ ಮುಂದಾದರು ಹೇಳಿಕೊಂಡರೆ ಅವುಗಳ ಮಧುರತೆ ಕಡಿಮೆಯಾಗುತ್ತದೆ. ಹೇಗಿರುತ್ತವೋ ಹಾಗಿಯೇ ಇರಲು ಬಿಟ್ಟು ಯಾವಾಗಲೂ ಮೆಲಕು ಹಾಕುತ್ತಿದ್ದರೆ ಇಡೀ ಜೀವನ ಕಾಲ ಮನಸ್ಸಿಗೆ ಆಹ್ಲಾದಕತೆ ನೀಡುತ್ತವ.

ಸುಮ್ಮನೆ ಬೀಸುವ ಗಾಳಿ ಕೂಡ ಕೊಳಲಿನಿ ಮೂಲಕ ಹಾದು ಹೋದರೆ ಸಂಗೀತವಾಗುತ್ತದೆ. ತುಂತುರು ಮಳೆ ಹನಿಗಳು ಬೀಳುತ್ತಿರುವಾಗ ಅವುಗಳಿಗೆ ಸೂರ್ಯನ ಕಿರಣಗಳಿಂದ ಸ್ಪರ್ಶಿತವಾಗುವ ಅವಕಾಶ ದೊರೆತರೆ ಕಾಮನಬಿಲ್ಲಾಗುತ್ತದೆ. ದುಂಬಿಯ ಚುಂಬನದಿಂದ ಪುಳಕಿತಗೊಂಡಂತೆ ಮೊಗ್ಗರಳಿ ಹೂವಾಗುತ್ತದೆ. ತುಂಟತನದ ಯೋಚನೆಗಳನ್ನು ನೆನೆನೆದು ನನ್ನ ತುಟಿಗಳು ಮುಗುಳ್ನಗುತ್ತವೆ.

ಒಮ್ಮೊಮ್ಮೆ ಈ ಯೋಚನೆಗಳು, ಈ ಭಾವನೆಗಳು, ಈ ಅನುಭೂತಿಗಳು... ಇವೆಲ್ಲವೂ ಅದೆಷ್ಟು ನನ್ನನ್ನು ತಮ್ಮಲ್ಲಿ ಮುಳುಗಿಸಿಕೊಂಡು ಬಿಡುತ್ತವೆಂದರೆ ಮೇಲೆಳುವುದಕ್ಕೆ ಮನಸ್ಸು ಒಪ್ಪುವುದೇ ಇಲ್ಲ. ಇಡೀ ಜಗತ್ತಿನಿಂದಲೇ ನನ್ನ ಸಂಬಂಧ ಕಡಿದು ಹೋಗಿರುತ್ತದೆ. ಆ ಗುಂಗಿನಿಂದ ಹೊರ ಬಂದರೂ ಮತ್ತೆ ಅಲ್ಲಿಗೇ ಹೋಗಬೇಕೆನಿಸುತ್ತದೆ. ಅಲ್ಲಿಯೇ ಇರಬೇಕೆನಿಸುತ್ತದೆ.
ನನ್ನ ಜಗತ್ತದು...!

No comments:

Post a Comment