Powered By Blogger

ಇಲ್ಲಿ ಕ್ಲಿಕ್ ಮಾಡಿ

Friday, November 18, 2011

ಪ್ರೇಮ ಪತ್ರ 1


(ಈ ಪತ್ರ ಕೇವಲ ಊಹಾಲೋಕದಲ್ಲಿ ವಿಹರಿಸುತ್ತಾ ಬರೆದದ್ದು. ಯಾವ ವ್ಯಕ್ತಿಗೂ ಸಂಬಂಧಿಸಿ ಬರೆದದ್ದಲ್ಲ. ನಾನೇ ಬರೆದ "ನವಿಲು ಗರಿ" ಎಂಬ ಕಥೆಯಿಂದ ಇದನ್ನು ಆರಿಸಿಕೊಂಡು ಇಲ್ಲಿ ಪ್ರಸ್ತಾಪಿಸುತ್ತಿದ್ದೇನೆ. ಓದಿದ ನಂತರ ಕಾಮೆಂಟ್ ಮಾಡುವುದನ್ನು ಮರೆಯಬೇಡಿ - ಇಂತಿ ತಮ್ಮ ಶೇಖರ್ ಹಾಸಿಗಲ್).


“…….ಗೆ,

ಪತ್ರ ಬರೆಯುವ ಯಾರೊಬ್ಬರೂ ಸಂಬೋಧನೆಯ ವಿಷಯದಲ್ಲಿ ನನ್ನಷ್ಟು ತಲೆ ಕೆಡಿಸಿಕೊಂಡಿರಲಿಕ್ಕಿಲ್ಲ. ನಿನಗೋಸ್ಕರ ಸರಿಯಾದ ಸಂಬೋಧನೆ ಬಳಸುವ ಯೋಚನೆಯಲ್ಲಿ ಸರಿ ಸುಮಾರು ಹದಿನೈದು ಪೇಜ್‌ಗಳು ನಾನು ಕುಳಿತಿರುವ ಕುರ್ಚಿಯ ಸುತ್ತಲೂ ಮುದ್ದೆಯ ರೂಪದಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ. ಇಷ್ಟಾದರೂ ಸರಿಯಾದ ಸಂಬೋಧನೆ ಹೊಳೆಯದೆ, ಕೊನೆಗೆ ಯಾವ ಸಂಬೋಧನೆಯನ್ನು ಬಳಸದೆ ಪತ್ರವನ್ನು ಆರಂಭಿಸುತ್ತಿರುವೆ. ಈ ಸಣ್ಣ ತಪ್ಪಿಗೆ ಕ್ಷಮೆ ಇರಲಿ.

ಒಂದು ವಾರದ ನಂತರವಷ್ಟೆ ನಮ್ಮಿಬ್ಬರ ಮದುವೆಯಾಗುವುದು ನಿಶ್ಚಯವಿರುವಾಗ ನಾನೇಕೆ ಈ ಪತ್ರ ಬರೆಯುತ್ತಿದ್ದೇನೆಂಬ ಪ್ರಶ್ನೆ ಈಗಾಗಲೆ ನಿನ್ನನ್ನು ಕಾಡಲಾರಂಭಿಸಿರಬಹುದು. ಅದಕ್ಕಾಗಿಯೆ ಆರಂಭದಲ್ಲಿಯೆ ಈ ದೀರ್ಘ ಪತ್ರದ ಉದ್ದೇಶ ಸ್ಪಷ್ಟ ಪಡಿಸುತ್ತಿರುವೆ. ಪ್ಲೀಜ್, ಗಮನವಿಟ್ಟು ಓದು.

ಒಂದು ಸಣ್ಣ ನಿಜ ಹೇಳಲಾ ? ನನಗೆ ಅರೇಂಜ್ ಮ್ಯಾರೇಜ್ ಆಗುವುದಕ್ಕಿಂತಲೂ ಲವ್ ಮ್ಯಾರೇಜ್ ಆಗುವದರಲ್ಲಿಯೆ ಹೆಚ್ಚು ಒಲವಿತ್ತು. ಆದರೇನು ಮಾಡೋದು, ನಾನು ಯಾರನ್ನಾದಲೂ ಪ್ರೀತಿಸುವುದಕ್ಕೆ ಮುಂಚೆಯೆ ಹಿರಿಯರು ನನ್ನ ಮದುವೆಯನ್ನು ನಿನ್ನ ಜೊತೆ ನಿಶ್ಚಯಿಸಿ ಬಿಟ್ಟರು. ನಿನ್ನನ್ನು ನೋಡುವುದಕ್ಕೆ ಮುಂಚೆ ಹಿರಿಯರ ನಿಶ್ಚಯದ ಮುಂದೆ ಪ್ರಶ್ನೆ ಚಿಹ್ನೆ ಇಡಬೇಕೆಂದು ನಿರ್ಧರಿಸಿದ್ದೆ. ಆದರೆ ನಿನ್ನನ್ನು ನೋಡುತ್ತಲೆ ನನ್ನ ನಿರ್ಧಾರ ಬದಲಾಯಿತು. ಮದುವೆಯಾದ ನಂತರ ನಿನ್ನನ್ನೆ ಪ್ರೀತಿಸಿದರಾಯಿತು ಎಂದುಕೊಂಡೆ.

ಮದುವೆಯಾಗುವ ಮುಂಚೆ ಒಬ್ಬರನೊಬ್ಬರು ಅರ್ಥಮಾಡಿಕೊಳ್ಳುವುದು ಮದುವೆಯ ನಂತರದ ಜೀವನದ ಮೇಲೆ ಆರೋಗ್ಯಕರ ಪ್ರಭಾವ ಬೀರುತ್ತದೆ. ಹೆಣ್ಣಾಗಲಿ ಗಂಡಾಗಲಿ ತನ್ನ ಸಂಗಾತಿಯ ಮಾನಸಿಕತೆಯ ಬಗ್ಗೆ, ಯೋಚಿಸುವ ರೀತಿಯ ಬಗ್ಗೆ, ಭಾವನೆಗಳ ಬಗ್ಗೆ, ವಿಚಾರಗಳ ಬಗ್ಗೆ, ಅಭಿಪ್ರಾಯಗಳ ಬಗ್ಗೆ, ಬೇಕು-ಬೇಡಗಳ ಬಗ್ಗೆ, ಮನೋಧೋರಣೆಗಳ ಬಗ್ಗೆ....... ಮದುವೆಗೆ ಮುಂಚೆಯೆ ಅರಿತುಕೊಳ್ಳುವುದು ಯಶಸ್ವಿ ಮತ್ತು ಮಧುರ ದಾಂಪತ್ಯ ಜೀವನಕ್ಕೆ ಮುನ್ನುಡಿಯಾಗುತ್ತದೆಂದು ನನ್ನ ಅಭಿಪ್ರಾಯ.

ನಿನ್ನ ಯೋಚನೆಗಳನ್ನು ತಿಳಿಯಲು ನನ್ನಿಂದ ಸಧ್ಯಕ್ಕಂತೂ ಸಾಧ್ಯವಿಲ್ಲ. ಆದರೆ ನನ್ನ ಯೋಚನೆಗಳನ್ನಾದರೂ ನಿನಗೆ ತಿಳಿಸುವ ಇಚ್ಛೆ ಮತ್ತು ಉದ್ದೇಶದಿಂದ ಈ ಪತ್ರವನ್ನು ಬರೆಯುತ್ತಿದ್ದೇನೆ. ಪ್ಲೀಜ್, ಸಾಧ್ಯವಾದಷ್ಟು ನನ್ನ ಭಾವನೆಗಳೊಂದಿಗೆ ಸ್ಪಂದಿಸುವುದರೊಂದಿಗೆ ನನ್ನನ್ನು ಅರ್ಥ ಮಾಡಿಕೊಳ್ಳುವುದಕ್ಕೆ ಪ್ರಯತ್ನಿಸುತ್ತಾ ಓದು.

ಯಾರೊ ಓಬ್ಬ ತತ್ವಜ್ಞಾನಿ "Share your happiness with all but suffer your sorrow alone" (ಸಂತೋಷವನ್ನು ಎಲ್ಲರೊಂದಿಗೂ ಹಂಚಿಕೊ, ಆದರೆ ದು:ಖ ಮಾತ್ರ ನಿನೊಬ್ಬನೆ ಅನುಭವಿಸು) ಎಂದಿದ್ದಾನೆ. ಅದೇಕೊ ಈ ಮಾತು ನನ್ನ ಗಂಟಲಿನ ಕೆಳಗಡೆ ಇಳಿಯುತ್ತಿಲ್ಲ. ಇಡೀ ಜಗತ್ತಿನೊಂದಿಗೆ ಈ ಸೂತ್ರ ಪಾಲಿಸಬೇಕೆಂಬುದೇನೊ ನಿಜ, ಆದರೆ ಬಾಳ ಸಂಗಾತಿಯೊಂದಿಗೆ...... ಊಹ್ಞೂ, ಖಂಡಿತ ಈ ಸೂತ್ರ ಪಾಲಿಸಬಾರದು. ಒಂದು ವಿಷಯವಂತೂ ನಾನು ಬಲವಾಗಿ ನಂಬುತ್ತೇನೆ. ಗಂಡ-ಹೆಂಡತಿ ಸಂತೋಷವಾಗಿರಬೇಕೆಂದರೆ, They have to share everything (ಅವರು ಎಲ್ಲವನ್ನೂ ಹಂಚಿಕೊಳ್ಳಬೇಕು). ಸಂತೋಷವಿರಲಿ ದು:ಖವಿರಲಿ ಹಂಚಿಕೊಳ್ಳುವ ಅಭ್ಯಾಸ ಇಬ್ಬರಲ್ಲೂ ಇರಬೇಕು. ಭಾವನೆಗಳ, ಯೋಚನೆಗಳ, ಅನಿಸಿಕೆಗಳ, ಅನುಭೂತಿ-ಅನುಭವಗಳ..... ಇತ್ಯಾದಿಗಳ ವಿನಿಮಯ ಅವರಿರ್ವರಲ್ಲಿ ನಿರಂತರ ನಡೆಯುತ್ತಿರಬೇಕು. ಗುಟ್ಟುಗಳಾಗಲಿ ರಹಸ್ಯಗಳಾಗಲಿ ಯಾವುದೂ ಇರಬಾರದು.

ಯಾವುದೇ ವಿಷಯವಾಗಲಿ ಹೇಳದೆ ಇದ್ದರೆ ತಪ್ಪಾಗುತ್ತದೆ, ಅಪರಾಧವಾಗುತ್ತದೆ, ಅನ್ಯಾಯವೆಸಗಿದಂತಾಗುತ್ತದೆ ಎಂದೆಲ್ಲ ಯೋಚಿಸಿ ಹೇಳುವುದಕ್ಕಿಂತಲೂ 'ಈ ವಿಷಯ' ಹಂಚಿಕೊಳ್ಳುವುದರಿಂದ ನಾವು ಇನ್ನಷ್ಟು ಹತ್ತಿರವಾಗುತ್ತೇವೆ ಎಂಬ ಭಾವನೆಯಿಂದ ಹೇಳುವುದು ಶ್ರೇಷ್ಠವಾಗುತ್ತದೆ. ಆದ್ದರಿಂದ ತನ್ನ ಬಾಳ ಸಂಗಾತಿಯೊಂದಿಗೆ "Shared joy is double joy and shared sorrow is half sorrow" (ಹಂಚಿಕೊಂಡ ಸಂತೋಷ ದ್ವಿಗುಣವಾಗುತ್ತದೆ ಹಾಗೂ ಹಂಚಿಕೊಂಡ ದು:ಖ ಅರ್ಧವಾಗುತ್ತದೆ) ಎಂಬ ನೀತಿಯನ್ನು ಅನುಸರಿಸಬೇಕು.

ನಮ್ಮಿಬ್ಬರ ನಡುವೆ ಯಾವತ್ತು ಹೆಪ್ಪುಗಟ್ಟಿದ ಸ್ಮಶಾನ ಮೌನವಿರಬಾರದು. ಒಂದು ವೇಳೆ ಮೌನವಿದ್ದರೂ ಅದು ನಮ್ಮಿಬ್ಬರ ಮನಸ್ಸುಗಳ ತಂತಿಯನ್ನು ಮೀಟಿ ಭಾವತರಂಗಗಳನ್ನು ಅಲೆ-ಅಲೆಯಾಗಿ ಸುಮಧುರ ಸಂಗೀತವಾಗಿ ಹೊರಸೂಸುವಂತಿರಬೇಕು.

ನಿರಾಸೆಯಿಂದ ಕೂಡಿದ ಕಂಬನಿಗೂ ಆನಂದ ಭಾಷ್ಪಕ್ಕೂ ದೂರದ ವ್ಯತ್ಯಸವಿಲ್ಲ ಎಂದು ನನಗೆ ಗೊತ್ತು. ಮುಂಜಾನೆಯ ಕೋಗಿಲೆಯ ‘ಕುಹೂ-ಕುಹೂ', ಗಿಳಿಗಳ ಚಿಲಿಪಿಲಿ, ಗುಬ್ಬಿಗಳ ಇಂಚರಗಳನ್ನು ಕೇಳುವುದು... ಬೆಳದಿಂಗಳಲ್ಲಿ ಮನೆಯ ಮಾಳಿಗೆಯ ಮೇಲೆ ಕುಳಿತು ಕಣ್ಣು ಹೊಡಿಯುವ ಕೋಟಿ ನಕ್ಷತ್ರಗಳ ಹೊಳಪನ್ನು ವೀಕ್ಷಿಸುವುದು…… ದುಂಬಿಗಳ ಜ್ಹೆಂಕಾರದಲ್ಲಿ ಓಂಕಾರದ ನಿನಾದವಿದೆ ಎಂದು ಅರಿಯುವುದು….ಪ್ರಕೃತಿ ಬಿಡಿಸಿಟ್ಟಿರುವ ಅಮೋಘ ಚಿತ್ರವನ್ನು ಜೀವಂತಗೊಳಿಸುವ ಬಣ್ಣ-ಬಣ್ಣದ ಚಿಟ್ಟೆಗಳನ್ನು ನೋಡುವುದು…. ಇವೆಲ್ಲ ಬದುಕಿಗೆ ಸಾಕಷ್ಟು ಆಹ್ಲಾದಕತೆಯನ್ನು ನೀಡುತ್ತವೆ. ಸೂರ್ಯ ರಶ್ಮಿಗೊಸ್ಕರ ಕಾದು ಕುಳಿತಿರುವ ಮುದುಡಿದ ತಾವರೆಗೂ ಕಿರಣಗಳಿಂದ ಸ್ಪರ್ಶಿತವಾಗಿ ಅರಳಿದ ತಾವರೆಗೂ ಇರುವ ಕಾಯುವಿಕೆಯ ಪ್ರಕ್ರಿಯೆಯನ್ನು ಕಂಡು ನಾನು ಬೆರಗಾಗುತ್ತೇನೆ.

ನಮ್ಮಿಬ್ಬರ ಮಧ್ಯೆ ಸ್ನೇಹಮಯ ವಾತಾವರಣವಿರಬೇಕೆಂದು ನನ್ನಾಸೆ. 'ಯಾವುದನ್ನು ನೀನು ಜಗತ್ತಿನ ಯಾರ ಮುಂದೆಯೂ ಹೇಳಲು ಸಾಧ್ಯವಿಲ್ಲವೊ ಅದನ್ನು ಒಂದು ವೇಳೆ ನಿನ್ನ ಬಾಳ ಸಂಗಾತಿಗೆ ಹೇಳಲು ನೀನು ಇಷ್ಟಪಟ್ಟರೆ....... ಖಂಡಿತ ನೀನು ಜಗತ್ತಿನ ಎಲ್ಲಕ್ಕೂ ಉತ್ತಮ ಬಾಳ ಸಂಗಾತಿಯನ್ನು ಹೊಂದಿರುವೆ' ಎಂಬುದು ನನ್ನ ಸ್ಪಷ್ಟ ಅಭಿಪ್ರಾಯ.

ಬದಕು ಒಂದು ವೀಣೆಯಂಥದ್ದು. ಜೋರಾಗಿ ಸಿಕ್ಕ ಸಿಕ್ಕ ಹಾಗೆ ಬಾರಿಸಲು ಹೋದರೆ ತಂತಿಗಳು ಕಡೆದು ವೀಣೆ ಕೆಲಸಕ್ಕೆ ಬಾರದಂತಾಗುತ್ತದೆ. ಅದನ್ನು ಮೃದುವಾಗಿ ಮೀಟಿದರೆ..... ಮಧುರ ಸಂಗೀತ ಹೊರಹೊಮ್ಮುತ್ತದೆ. ಹಾಗೆ ಹೊರ ಹೊಮ್ಮುವ ಸಂಗೀತವನ್ನು ಯಾವ ರಾಗಕ್ಕೆ, ಯಾವ ತಾಳಕ್ಕೆ, ಯಾವ ಹಾಡಿಗೆ ಹೊಂದಿಸಿಕೊಳ್ಳಬೇಕೆಂಬ ನಿರ್ಧಾರ ಕೂಡ ನಮಗೇ ಬಿಟ್ಟಿದ್ದು.



'ನೀನು ಕೊಳಲಾಗು ನಾನು ಗಾಳಿಯಾಗುವೆ
ನೀನು ವೀಣೆಯಾಗು ನಾನು ಬೆರಳಾಗುವೆ
ನೀನು ಹಕ್ಕಿಯಾಗು ನಾನು ರೆಕ್ಕೆಯಾಗುವೆ
ನೀನು ನವಿಲಾಗು ನಾನು ನಾಟ್ಯವಾಗುವೆ
ನೀನು ತುಟಿಗಳಾಗು ನಾನು ಮುಗುಳ್ನಗೆಯಾಗುವೆ.'


ಯಾವ ವಿಷಯವಾದರೂ ಪರವಾಗಿಲ್ಲ, ಪ್ರತಿಯೊಂದು ಕ್ಷಣವನ್ನೂ ಪೂರ್ಣವಾದ ತನ್ಮಯತೆಯಿಂದ ಕಳೆಯುವಂತಾದರೆ..... ಆಹಾ ! ಅದಕ್ಕಿಂತಲೂ ಸಂತಸದ ವಿಷಯ ಜಗತ್ತಿನಲ್ಲಿ ಬೇರೇನು ತಾನೆ ಇರಲು ಸಾಧ್ಯ ? ದುಂಬಿಯೊಂದು ಹೂವಿನ ಮಕರಂದ ಹೀರುವಾಗಿನ ತನ್ಮಯತೆ, ಮಗುವೊಂದು ತಾಯಿಯ ಎದೆಹಾಲು ಕುಡಿಯುವಾಗಿನ ತನ್ಮಯತೆ, ತನ್ನಿನಿಯನ ನೆನಪಿನಲ್ಲಿ ಮೈ ಮರೆಯುವ ನಲ್ಲೆಯ ತನ್ಮಯತೆ, ತುಂತುರು ಮಳೆ ಹನಿಯಲ್ಲಿ ನೆನದು ಬಂದು ಬಿಸಿ ಬಿಸಿ ಕಾಫಿ ಕುಡಿಯುವಾಗಿನ ತನ್ಮಯತೆ..... ಇವೆಲ್ಲ..... ಇವೆಲ್ಲವೂ ತನ್ನದೆಯಾದ ಮಧುರಾತಿಮಧುರ ಭಾವಗಳನ್ನು ತಮ್ಮಲ್ಲೆ ಅಡಗಿಸಿಕೊಂಡಿವೆ. ಈ ಎಲ್ಲವುಗಳ ತನ್ಮಯತೆ ಬಹಳಷ್ಟು ಕಡಿಮೆ ಕ್ಷಣಗಳನ್ನು ಹೊಂದಿರುತ್ತವೆಯಾದರೂ ಆ ಕ್ಷಣಗಳಲ್ಲಿ ಅನುಭವಿಸುವ ಆಹ್ಲಾದಕತೆಯನ್ನು ಅಭಿವ್ಯಕ್ತಿಸುವುದಕ್ಕೆ... ವರ್ಣಿಸುವುದಕ್ಕೆ ಸಾಧ್ಯವಾಗದಷ್ಟು ಮನೋಹರವಾಗಿರುತ್ತವೆ.

ನಮ್ಮಿಬ್ಬರ ನಡುವಿನಿಂದ ಹಾದು ಹೋಗುವ ಪ್ರತಿ ಕ್ಷಣವೂ ಇಂತಹುದೆ ತನ್ಮಯತೆಯಿಂದ ಕೂಡಿರಬೇಕೆಂಬ ಬಯಕೆ ನನ್ನದು. ನಿನಗೂ ಈ ಬಯಕೆ ಇರಬಹುದೆಂದು ಊಹಿಸುತ್ತೇನೆ.

ತಿಳಿ ಕಪ್ಪು ಬಾನಿನಲ್ಲಿ ಪೂರ್ಣಚಂದ್ರ ಮುಗುಳ್ನಗುತ್ತಿದ್ದಾನೆ. ಸಣ್ಣದಾಗಿ ತಂಗಾಳಿ ಬೀಸುತ್ತಿದೆ. ಪ್ರಶಾಂತವಾದ ವಾತಾವರಣವಿದೆ. ನಿನ್ನ ತೊಡೆಯ ಮೇಲೆ ತಲೆಯನಿಟ್ಟು ನಾನು ಚಿಕ್ಕ ಮಗುವಿನಂತೆ ಮಲಗಿದ್ದೇನೆ. ಬೆಳದಿಂಗಳ ಹಾಲಿನಲ್ಲಿ ಮೀಯುತ್ತಿರುವ ನಿನ್ನ ಮುಖದ ಮೇಲೆ ನನ್ನ ದೃಷ್ಟಿ ಇದೆ. ಆಗಾಗ ನನ್ನ ಬಲಗೈ ನಿನ್ನ ಮುಂಗುರುಳನ್ನು ಛೇಡಿಸುತ್ತಿದೆ. ನಿನ್ನ ಬೆರಳುಗಳು ನನ್ನ ಕೂದಲಿನೊಂದಿಗೆ ಆಟವಾಡುತ್ತಿವೆ. ನೀನೇನೇನೊ ಹೇಳುತ್ತಿರುವೆ. ಆದರೆ ನನಗದು ಅರ್ಥವಾಗುತ್ತಿಲ್ಲ. ನಿನ್ನ ಧ್ವನಿ ನನ್ನ ಕಿವಿಗಳ ತಮಟೆಗಳವರೆಗೂ ತಲಪುತ್ತಿದೆಯಾದರೂ ಮೆದಳು ಕೇವಲ ನನ್ನ ಕಣ್ಣುಗಳ ಸಂದೇಶವನ್ನಷ್ಟೆ ಸ್ವೀಕರಿಸುತ್ತಿದೆ. ಏಕೆಂದರೆ, ನನ್ನ ಕಣ್ಣುಗಳೆರಡೂ ನಿನ್ನ ಮೃದು ಗುಲಾಬಿ ತುಟಿಗಳ ಮೇಲೆ ತಮ್ಮ ದೃಷ್ಟಿ ನೆಟ್ಟಿವೆ. ನೀನು ಮಾತನಾಡುತ್ತಿರುವಾಗ ನಿನ್ನ ತುಟಿಗಳ ಬಡಿತ ಮತ್ತು ಕಂಪನವೂ ನನ್ನನ್ನು ಚುಂಬಕದಂತೆ ಆಕರ್ಷಿಸುತ್ತಿವೆ. ನಾನು ನನ್ನ ಎರಡೂ ಕೈಗಳಿಂದ ನಿನ್ನ ಕತ್ತನ್ನು ಬಳಸಿಕೊಂಡು ಇನ್ನೇನು...... ಅಷ್ಟರಲ್ಲೇ ನನ್ನ ಕಣ್ಣುಗಳು ತೆರೆಯುತ್ತವೆ. ನಿದ್ರೆಯಿಂದ ಎಚ್ಚರಗೊಳ್ಳುತ್ತೇನೆ. ಇಲ್ಲಿಗೆ ಸುಮಧುರ ಕನಸು ಮುಗಿಯುತ್ತದೆ. ಈ ಕನಸು ಯಾವತ್ತು ನನಸಾಗುತ್ತದೊ ? ನಿನ್ನನ್ನೆ ಕೇಳುತ್ತಿರುವೆ ಗೆಳತಿ, ಈ ನನ್ನ ಮಧುರ ಕನಸನ್ನು ಯಾವಾಗ ನನಸಾಗಿಸುತ್ತಿಯಾ ಹೇಳು ?

ಅಂದ ಹಾಗೆ ಈ ಪತ್ರದ ಜೊತೆಗೆ (ಗುಲಾಬಿ ಹೂ ಕಳುಹಿಸಿದರೆ ಬಾಡಿ ಹೋಗುತ್ತದೆಂಬ ಭಯದಿಂದ) ಒಂದು ನವಿಲುಗರಿಯನ್ನು ಕಳುಹಿಸುತ್ತಿರುವೆ, ಸ್ವೀಕರಿಸು.



ನಿನ್ನ ಬುದ್ಧಿ ಮಟ್ಟವಾಗಲಿ, ನಿನ್ನ ಮಾನಸಿಕತೆಯಾಗಲಿ ಅಥವಾ ನಿನ್ನ ವಿಚಾರಗಳ ಬಗ್ಗೆಯಾಗಲಿ ನನಗೆ ಏನೊಂದೂ ಗೊತ್ತಿಲ್ಲ. ಹೀಗಾಗಿ ಈ ಪತ್ರದಿಂದ ನಿನ್ನ ಭಾವನೆಗಳಿಗೆ ದಕ್ಕೆ ಉಂಟಾಗುವ ಸಂಭವವಿದೆ. ಹಾಗೇನಾದರೂ ದಕ್ಕೆ ಉಂಟಾಗಿದ್ದರೆ ಕ್ಷಮೆ ಇರಲಿ.

ಇಂತಿ ನಿನ್ನ ಮತ್ತು ಎಂದೆಂದಿಗೂ ನಿನ್ನವನೇ ಆದ
ಶೇಖರ್."

Monday, November 14, 2011

ಮೊಗ್ಗರಳಿ ಹೂವಾಗುವ ಮುನ್ನ...!













ಮೊನ್ನೆ ಗೆಳೆಯನೊಬ್ಬನ Mailನಲ್ಲಿ ಚಿತ್ರಗಳನ್ನು ನೋಡಿದೆ. ನನಗೇ ತಿಳಿಯದಂತೆ ಕಣ್ಣುಗಳು ಮಂಜಾಗಿದ್ದವು. ಕೆನ್ನೆಗಳೆರಡು ತಿಳಿ ಕಂಬನಿಯಿಂದ ಒದ್ದೆ ಆಗಿದ್ದವು. ನನಗೆ ಮುಂಚಿತವಾಗಿಯೆ ಬಗ್ಗೆ ತಿಳಿದಿತ್ತಾದರೂ ಸ್ಥಿತಿ ಇಷ್ಟೊಂದು ದಾರುಣವಾಗಿರುತ್ತದೆಂದು ಊಹಿಸಿರಲಿಲ್ಲ. ಒಂದೆರಡು ಕಷ್ಟಗಳೆದುರಾದರು ಜಗತ್ತೇ ಮುಳುಗಿ ಹೊಯಿತೆನೋ ಎಂಬಂತೆ ಪೇಚಾಡುವ ನಾವುಗಳಿಗೆ ಮಕ್ಕಳ ಬಗೆ ಹರಿಯದ ನಿತ್ಯ ವಿನೂತನ ಸಮಸ್ಯೆಗಳನ್ನು ಊಹಿಸಲಾಗದೆ ಹೊದದ್ದು ಆಶ್ಚರ್ಯವೆನಲ್ಲ.

ಯೋಚಿಸಿದರೆ ಇಡೀ ಸಮಾಜವನ್ನೇ ಸುಟ್ಟು ಭಸ್ಮ ಮಾಡಿ ಬಿಡಬೇಕೆನಿಸುತ್ತದೆ. ಆಧುನಿಕತೆಯ ಸಭ್ಯ ಸಮಾಜದಲ್ಲಿ ಇನ್ನು ಇಂತಹ ಅದಿನ್ನೇಷ್ಟು ವಿಕಾರಗಳಡಗಿವೆಯೋ ಯಾರಿಗೆ ಗೊತ್ತು ? ಮಕ್ಕಳನ್ನು ದೇವರ ಪ್ರತಿ ರೂಪವೆಂದು ಸಾರುವ ನಮ್ಮ ದೇಶದಲ್ಲಿ ಈ ರೀತಿ ಮಕ್ಕಳ ಶೋಷಣೆ ನಡೆಯುತ್ತಿರುವುದು ಅದೇಕೊ ಮನಸ್ಸನ್ನು ಕಲಕುತ್ತಿದೆ. ಆ ಮುಗ್ದ ಕಂಗಳಿಂದ ಸುರಿದ ಪ್ರತಿ ಕಣ್ಣೀರು ನಮ್ಮ ದೇಶದ ದೌರ್ಭಾಗ್ಯದ ಪ್ರತೀಕದಂತೆ ತೋರುತ್ತಿದೆ. ಕನಸು ಕಾಣದ ಕಣ್ಣುಗಳವು.

ಕ್ಕಳ ದಿನಾಚರಣೆಯ ದಿನದಂದು ಇಷ್ಟೆಲ್ಲ ಬರೆಯುವ ಔಚಿತ್ಯವಾದರೂ ಎನಿತ್ತೆಂದು ನೀವು ಕೇಳಿದರೆ, ನನ್ನಲ್ಲಿ ಯಾವ ಉತ್ತರವೂ ಇಲ್ಲ.

ಗೆಳೆಯರೆ, ನಿಮ್ಮಲ್ಲಿ ಸವಿನಯ ವಿನಂತಿ ಏನಂದರೆ, ನೀವು ಎಲ್ಲಿಯೆ ರೀತಿ ಕಷ್ಟದಲ್ಲಿ ಸಿಲುಕಿರುವ ಮಕ್ಕಳನ್ನು ಕಂಡರೆ ದಯವಿಟ್ಟು ನಿಮ್ಮಿಂದ ಸಾಧ್ಯವಾದಷ್ಟು ಸಹಾಯ ಮಾಡಿ. ನೊಂದ ಜೀವಗಳಿಗೆ ಒಂದಿಷ್ಟಾದರೂ ಸಾಂತ್ವನ ಹೇಳಿ. ಕೊನೆ ಪಕ್ಷ ಪ್ರೀತಿಯ ನೋಟವನ್ನೇ ಬೀರಿ ಸಾಕು.

Sunday, November 13, 2011

ಬೀchiಯವರ ಕೆಲವು ಸಾಲುಗಳು

(ಆರು ವರ್ಷಗಳ ಹಿಂದೆ ನಾನು ಬೀchiಯವರು ಬರೆದಿದ್ದ ಕೆಲವು ಕಥೆಗಳನ್ನು ಹಾಗೂ ಕಾದಂಬರಿಗಳನ್ನು ಓದಿದ್ದೆ. ಓದುತ್ತಿರುವಾಗ ಮನಸ್ಸಿಗೆ ಹಿಡಿಸಿದ ಸಾಲುಗಳನ್ನು Underline ಮಾಡಿ Note bookನಲ್ಲಿ ಬರೆದುಕೊಂಡಿದ್ದೆ. ಅವು ಸುಮಾರು ಐವತ್ತಕ್ಕೂ ಮೇಲ್ಪಟ್ಟು ಪುಟದಷ್ಟಿವೆ. ಅದರಿಂದ ಕೆಲವು ಆಯ್ದ ಸಾಲುಗಳನ್ನು ಇಲ್ಲಿ ಪ್ರಸ್ತುತ ಪಡಿಸುತ್ತಿದ್ದೇನೆ. ಓದಿ ಆನಂದಿಸಿ)

* "ಸತ್ತ ವಿವೇಕಿಯ ಸಲವಾಗಿ ಅಳುವುದಕ್ಕಿಂತ ಇರುವ ಅವಿವೇಕಿಗಾಗಿಯೆ ಅಳುವುದು ಹೆಚ್ಚು ಸೂಕ್ತ."

* "ಹೆಂಡತಿಯ ಆರೋಗ್ಯವೇ ಗಂಡನ ಭಾಗ್ಯ"

* "ಕಾಯಿಲೆ ತಾನಾಗಿಯೇ ಗುಣವಾಗುವವರೆಗೂ Or ರೋಗಿಯೂ ಔಷಧದಿಂದ ಸಾಯುವವರೆಗೂ ಡಾಕ್ಟರ್ ಬೇಕೆ ಬೇಕು."

* "ಯಾವೊಬ್ಬನೂ ಹೊಗಳಿಕೆಯನ್ನು ದಾನವಾಗಿ ಕೊಡುವುದಿಲ್ಲ. ಆದಷ್ಟು ಬೇಗ ಮರಳಿ ಕೊಡು ಎಂದು ಹೇಳಿ ಕೊಡುತ್ತಾನೆ."

* "ದೂಡುವ ಮುನ್ನವೇ ದುಪ್ಪೆಂದು ಬೀಳುವವನೇ ಹೇಡಿ."

* "ಸೌಂದರ್ಯಕ್ಕಾಗಿ ಹೆಣ್ಣನ್ನು ಮೆಚ್ಚುವವನಕ್ಕಿಂತಲೂ ಬಾಟಲಿ ಚೆನ್ನಾಗಿದೆ ಎಂದು ವಿಷ ಕುಡಿಯುವವ ಹೆಚ್ಚು ಜಾಣ."

* "ಸೌಂದರ್ಯವೆಂಬುದು ಮದುವೆಯಾದ ಕೆಲ ಕ್ಷಣ ಮಾತ್ರವೇ ಹೆಂಡತಿಯ ಮುಖದಲ್ಲಿದ್ದು, ಅದಾವಾಗಲೋ ಇತರರ ಹೆಂಡಿರ ಮುಖಕ್ಕೆ ಹಾರಿ ಹೋಗುವ ಮಹಾಭೂತ."

* "ಸುಳ್ಳನ್ನು ಕೇಳಲಾರೆ ಎನ್ನುವವನು ಕಿವಿಯನ್ನು ಮುಚ್ಚಿಕೊಳ್ಳುವುದಕ್ಕಿಂತಲೂ ಬಾಯಿಯನ್ನೇ ಮುಚ್ಚಿಕೊಳ್ಳುವುದು ಒಳ್ಳೆಯದು."

* "ಇನ್ನೊಬ್ಬ ಸಾಹಿತಿ ಬರೆದುದನ್ನೆಂದೂ ಓದದವ, ಓದಿದರೂ ಮೆಚ್ಚದವ, ಮೆಚ್ಚಿದರೂ ಹೇಳದವನೇ ಸಾಹಿತಿ."

* "ಮಂತ್ರಿಗಳಿಗೆ ಮಾತನಾಡದಿರಲು, ಮಹಿಳೆಯರಿಗೆ ಸುಮ್ಮನಿರಲು ಹಾಗೂ ಸಾಹಿತಿಗಳಿಗೆ ಅಸೂಯೆ ಪಡದಿರಲು ಬಂದಿದ್ದರೆ ಶಾಂತಿ ಎಂಬುದು ಕಸದ ತಿಪ್ಪೆಯಲ್ಲೂ ಬಿದ್ದಿರುತ್ತಿತ್ತು."


(ನನ್ನ ಬ್ಲಾಗ್ ಓದುಗರು ಈ ರೀತಿಯ ಇನ್ನಷ್ಟು ಸಾಲುಗಳು ಓದಲು ಇಷ್ಟ ಪಟ್ಟರೆ ದಯವಿಟ್ಟು ಕಾಮೆಂಟ್ ಮೂಲಕ ನನಗೆ ತಿಳಿಸಿ. ಮತ್ತೊಂದು ಪೊಸ್ಟನಲ್ಲಿ ಇನ್ನಷ್ಟು ಸಾಲುಗಳನ್ನು ಪ್ರಸ್ತುತ ಪಡಿಸುತ್ತೇನೆ)

Friday, November 11, 2011

ಕಲ್ಪನಾ ವಿಹಾರಿ...!

ಕಲ್ಪನೆಯ ಕಣ್ಣುಗಳಿಂದ ಕನಸು ಕಾಣುವುದು ಕಷ್ಟವೇನಲ್ಲ. ಆದರೆ ಆ ಕನಸುಗಳನ್ನು ನನಸಾಗಿಸುವುದಿರುತ್ತಲ್ಲ ಅದು ...... ಅದು ತುಂಬಾ ಕಷ್ಟಕರವಾದದ್ದು.

ಕತ್ತಲೆಯೆಂದು ಕಣ್ಣು ಮುಚ್ಚಿಕೊಂಡರೆ ಬೆಳಕು ಮೂಡಿದ್ದೂ ತಿಳಿಯುವುದಿಲ್ಲ. ಸಾಧ್ಯವಾದರೆ ದೀಪ ಹಚ್ಚ ಬೇಕು. ಇಲ್ಲವಾದರೆ ಬೆಳಕಿನ ಕಿರಣ ಹುಡುಕಲು ಪ್ರಯತ್ನಿಸಬೇಕು. ಸುಮ್ಮನಿರುವವನು ಯಾವತ್ತೂ ಅಂಧ ಕೂಪದಿಂದ ಹೊರಬರುವುದಿಲ್ಲ.

ಜಗತ್ತಿನತ್ತ ಬೀರುವ ಮನುಷ್ಯನ ದೃಷ್ಟಿಕೋನ ಎಷ್ಟು ಬೇಗ ಪರಿಪಕ್ವವಾಗುತ್ತದೆಯೊ ಅಷ್ಟೂ ಒಳ್ಳೇಯದು. ನನ್ನ ದೃಷ್ಟಿಕೋನ ಪರಿಪಕ್ವವಾಗಿದೆಯೊ ಇಲ್ವೊ ನಾನರಿಯೆ. ಆದರೂ ಕೆಲವೊಂದು ಸಂದರ್ಭಗಳಲ್ಲಿ ನಾನು ಯೋಚಿಸುವ ರೀತಿ ತುಂಬಾ ವಿಶಿಷ್ಟವಾಗಿರುತ್ತದೆಂದು ನನಗನ್ನಿಸುತ್ತದೆ.

ಬಾಗಿಲಿಲ್ಲದ ಒಂದು ಸಣ್ಣ ಕೋಣೆಯಲ್ಲಿ ಬಂಧಿಯಾಗಿರುವಾಗ ಅತಿ ಚಿಕ್ಕ ಕಿಟಕಿಯ ಮೂಲಕ ಜಗತ್ತನ್ನು ನೋಡುತ್ತಾ ಏನೇನೋ ಊಹಿಸಿಕೊಳ್ಳುತ್ತಾ..... ಕಲ್ಪಿಸಿಕೊಳ್ಳುತ್ತಾ..... ಕನಸು ಕಾಣುತ್ತಾ ಇರುವುದು ಕೂಡಾ ತುಂಬಾ ಮಜಾ ಎನಿಸುತ್ತದೆ. ಸ್ವತಂತ್ರವಾಗಿದ್ದು ಸ್ವೇಚ್ಛಾಚಾರಿಯಾಗಿ ವರ್ತಿಸುವುದಕ್ಕಿಂತ ಬಂಧನದಲ್ಲಿದ್ದು ನೈತಿಕತೆಗೆ ಹೊಣೆಯಾಗಿರುವುದು ನನಗೆ ಹೆಚ್ಚು ಹಿಡಿಸುತ್ತದೆ.

ಹಿಂದೆ ಎಲ್ಲಿಯೊ ನನ್ನನ್ನು ನಾನು 'ಕಲ್ಪನಾ ವಿಹಾರಿ' ಎಂದು ಕರೆದುಕೊಂಡಿದ್ದೆ. ಈ ದಿನ ಆ ಮಾತಿಗೆ ಮತ್ತಷ್ಟು ಪುಷ್ಠಿ ಸಿಕ್ಕಿತು.

Thursday, November 10, 2011

ಮಮತಾ ಪಾಟೀಲ್ ಗೊಂದು Thanks !

"ಪ್ರತಿಭೆ ಇಲ್ಲ ಎನ್ನುವುದಾದರೆ ಬೆಳಸಿಕೊಳ್ಳಬೇಕು. ಅದು ದೈವದತ್ತವಾದುದಲ್ಲ"

ಮೂರು ವರ್ಷಗಳ ಹಿಂದೆ ನನ್ನ ದಿನಚರಿಯಲ್ಲಿ ಬರೆದುಕೊಂಡ ಸಾಲುಗಳಿವು. ಅದೇಕೋ ಇಂದು ಎಲ್ಲರ ಜೊತೆ ಹಂಚಿಕೊಳ್ಳಬೇಕೆನಿಸಿತು. ಹೀಗಾಗಿ ಇಲ್ಲಿ ಬರೆಯುತ್ತಿದ್ದೇನೆ.

(Hyderabad Karnataka Chamber of Commerce and Industry, Gulbarga
ಸಂಘದವರು ಒಂದು ಕಾರ್ಯಕ್ರಮ ಹಮ್ಮಿಕೊಂಡಿದ್ದರು. ನಾನು ನಮ್ಮ ಕಾಲೇಜ್ ನ್ನು ಪ್ರತಿನಿಧಿಸುತ್ತಾ ಅದರಲ್ಲಿ ಪಾಲುಗೊಂಡಿದ್ದೆ. ಆಗಿನ ಘಟನೆ ಇದು.)

ಅವಳು ನೋಡುವುದಕ್ಕೆ ಅಷ್ಟೆನೂ ಆಕರ್ಷಕವಾಗಿಲ್ಲ. ಎತ್ತರದಲ್ಲಾಗಲಿ, ಬಣ್ಣದಲ್ಲಾಗಲಿ, ಕೊನೆಗೆ ಮುಖಚಹರೆಯೂ ಇನ್ನೊಮ್ಮೆ ನೋಡಬೇಕೆನಿಸುವಂತಿಲ್ಲ. ಆದರೆ, ತುಟಿಗಳ ಮೇಲಿನ ಮುಗುಳ್ನಗೆ......... ಸ್ಪಷ್ಟ ಉಚ್ಛಾರಣೆಯಲ್ಲಿ ನಿರರ್ಗಳವಾಗಿ ಮಾತನಾಡುವ ಅವಳ ಪ್ರತಿಭೆ.......... ತನಗೆ ವಹಿಸಿದ ಜವಾಬ್ದಾರಿಯ ಸಂಪೂರ್ಣ ಅರಿವಿರುವ ಅವಳ ಗಂಭಿರತೆ........ ಬಟ್ಟೆಗಳೇನೋ ಪಾಶ್ಚಿಮಾತ್ಯ ಸಂಸ್ಕೃತಿಯನ್ನು ಬಿಂಬಿಸುತ್ತಿವೆಯಾದರೂ ಅವಳ ಮಾತುಗಳಲ್ಲಿ ಧ್ವನಿಸುತ್ತಿರುವ ಸೃಜನಶೀಲತೆ...... ಇವೆಲ್ಲವೂ ತಮ್ಮದೆಯಾದ ಆಕರ್ಷಣೆಯನ್ನು ಹೊಂದಿರುವುದಂತು ಸತ್ಯ ! ಮತ್ತೆ-ಮತ್ತೆ ಅವಳತ್ತ ನೋಡುವಂತೆ ಮಾಡುತ್ತಿರುವುದಂತೂ ಸತ್ಯ !

ಸೌಂದರ್ಯ ಕಣ್ಣುಗಳನ್ನು ಕುಕ್ಕಿದರೆ ಪ್ರತಿಭೆ ಹೃದಯವನ್ನು ಗೆಲ್ಲುತ್ತದೆ. ಅಂತಹ ಪ್ರತಿಭೆ ನನ್ನಲ್ಲಿ ಏಕಿಲ್ಲವೆಂದು ಪರಿತಪಿಸುತ್ತೇನೆ. ನನಗೂ ಯಾಕೆ ಅಷ್ಟು ಸೊಗಸಾಗಿ ಮಾತನಾಡಲು ಬರುವುದಿಲ್ಲ ? ನನ್ನ ನೆತ್ತರಿನಲೇಕೆ ತುಡಿತವಿಲ್ಲ ? Stage fear ಎನ್ನುವುದನ್ನು ಗೆದ್ದಿರುವೆನೆಂದು ಆಗಾಗ ಬೀಗುವ ನನಗೇಕೆ ಇನ್ನೂ ಅಷ್ಟು ಮನೋಹರವಾಗಿ ಮಾತನಾಡಲು ಬರುವುದಿಲ್ಲ ?

ಹತ್ತು ಜನರಲ್ಲಿ ನಾವು ಎದ್ದು ಕಾಣಿಸಬೇಕೆಂದರೆ ಉಳಿದ ಒಂಭತ್ತು ಜನರಲ್ಲಿ ಇಲ್ಲದ ಏನಾದರೂ ಒಂದು ವಿಶೇಷತೆ ನಮ್ಮಲ್ಲಿ ಇರಬೇಕು. ನಮ್ಮಲ್ಲಿ ಸೌಂದರ್ಯವಾದರೂ ಇರಬೇಕು, ಇಲ್ಲವೇ ಉಳಿದವರಿಗಿಂತ ಹೆಚ್ಚು ಬೆಲೆಯುಳ್ಳ ಆಕರ್ಷಕ ಬಟ್ಟೆಯನ್ನು ತೊಟ್ಟಿರಬೇಕು. ಕೊನೆಗೆ ಏನಿಲ್ಲವೆಂದರೂ ವಾಕ್ ಚಾತುರ್ಯವಾದರೂ ಇರಬೇಕು. ಇವು ಮೂರರಿಂದಲೂ ವಂಚಿತವಾಗಿದ್ದರೆ ಸುಮ್ಮನೆ ತೆಪ್ಪಗಿದ್ದು, ಹತ್ತರಗುಂಟ ಹನ್ನೊಂದು ಎಂಬಂತಿದ್ದು ಬಿಡಬೇಕು. ಇಲ್ಲವಾದಲ್ಲಿ ನಗೆಪಾಟಲಿಗೆ ಈಡಾಗಬೇಕಾಗುತ್ತೆ. ಉಳಿದ ಒಂಭತ್ತು ಜನ ನಮ್ಮನ್ನು ಮೂರ್ಖನೆಂದುಕೊಳ್ಳುತ್ತಾರೆ.

"Self examination is the first step towards change" ಎಂಬ ಮಾತು ನೆನಪಾಗುತ್ತಿದೆ. ಬರವಣಿಗೆಯಲ್ಲಿ ಸಾಧಿಸಿದ ಸಿದ್ಧಿಯನ್ನು ಇನ್ನು ಸುಮಧುರ ಸಂಭಾಷಣೆಯಲ್ಲೂ ಸಾಧಿಸಬೇಕು.

ಇಷ್ಟೆಲ್ಲಾ ಅಂತರ್ಮಥನಕ್ಕೆ ಕಾರಣಳಾದ ಕಾರ್ಯಕ್ರಮದ ನಿರೂಪಕಿ ಮಮತಾ ಪಾಟೀಲ್ ಗೊಂದು Thanks !

Tuesday, November 1, 2011

ಜೈ ಕನ್ನಡಾಂಬೆ...!




ಜೈ ಕನ್ನಡಾಂಬೆ...!

ಕರ್ನಾಟಕ ರಾಜ್ಯೋತ್ಸವ ಹಾರ್ದಿಕ ಶುಭಾಶಯಗಳು.

ತಾಯಿ ಭುವನೇಶ್ವರಿಯ ಕೃಪಾ ಕಟಾಕ್ಷದಿಂದಾಗಿ ಜನ್ಮವಂತು ಇಲ್ಲಿಯೇ ಪಡೆದಿದ್ದೇನೆ. ಮತ್ತೆ ಹುಟ್ಟಿ ಬರುವಂತಿದ್ದರೆ ಅದು ಕನ್ನಡ ತಾಯಿಯ ಮಡಿಲೇ ಆಗಿರಬೇಕೆಂದು ದೇವರಲ್ಲಿ ಪ್ರಾರ್ಥಿಸುತ್ತೇನೆ. ಕರುನಾಡ ತಾಯಿ ಸದಾ ಚಿನ್ಮಯಿ. ಕನ್ನಡ ಭಾಷೆ ನಮ್ಮ ಜೀವನಕ್ಕೆ ಕನ್ನಡಿ ಹಿಡಿದು ತೋರಿಸುವ ಜೀವಂತ ಸಮೃದ್ಧ ಭಾಷೆ. ಜ್ಞ್ಯಾನ ಪೀಠ ಪ್ರಶಸ್ತಿ ಪಡೆದ ಭಾರತದ ಏಕೈಕ ಭಾಷೆ ನಮ್ಮದು. ನನ್ನ ಒಂದು ಅತಿ ಪ್ರಿಯವಾದ ಹಾಡನ್ನು ಇಲ್ಲಿ ಬರೆಯುತ್ತಿರುವೆ. ಓದಿ....

ಸಾಹಿತ್ಯ: ಚಿ. ಉದಯಶಂಕರ್
ಸಂಗೀತ: ರಾಜನ್ ನಾಗೇಂದ್ರ
ಗಾಯನ: ಡಾ|| ರಾಜ್‍ಕುಮಾರ್
ರಾಗ: ಮೋಹನ್



ಜೇನಿನ ಹೊಳೆಯೊ ಹಾಲಿನ ಮಳೆಯೊ
ಸುಧೆಯೊ ಕನ್ನಡ ಸವಿ ನುಡಿಯೊ…… ||೨||
ವಾಣಿಯ ವೀಣೆಯ ಸ್ವರಮಧುರ್ಯವೋ
ಸುಮಧುರ ಸುಂದರ ನುಡಿಯೊ
ಆಹಾ…
ಜೇನಿನ ಹೊಳೆಯೊ ಹಾಲಿನ ಮಳೆಯೊ
ಸುಧೆಯೊ ಕನ್ನಡ ಸವಿ ನುಡಿಯೊ

ಕವಿ ನುಡಿ ಕೋಗಿಲೆ ಹಾಡಿದ ಹಾಗೆ
ಸವಿ ನುಡಿ ತಣ್ಣನೆ ಗಾಳಿಯ ಹಾಗೆ…… ||೨||
ಒಲವಿನ ಮಾತುಗಳಾಡುತಲಿರಲು
ಮಲ್ಲಿಗೆ ಹೂಗಳು ಅರಳಿದ ಹಾಗೆ
ಮಕ್ಕಳು ನುಡಿದರೆ ಸಕ್ಕರೆಯಂತೆ
ಅಕ್ಕರೆ ನುಡಿಗಳು ಮುತ್ತುಗಳಂತೆ
ಪ್ರೀತಿಯ ನೀತಿಯ ಮಾತುಗಳೆಲ್ಲ
ಸುಮಧುರ ಸುಂದರ ನುಡಿಯೊ

ಜೇನಿನ ಹೊಳೆಯೊ ಹಾಲಿನ ಮಳೆಯೊ
ಸುಧೆಯೊ ಕನ್ನಡ ಸವಿ ನುಡಿಯೊ

ಹ ಹಾ ಹ ಹ ಹ!! ಅಹ ಅಹಾ
ಅಹ ಅಹಾ!! ಹ ಹಾ ಹ ಹ ಹ!!

ಕುಮಾರವ್ಯಾಸನ ಕಾವ್ಯದ ಚೆಂದ
ಕವಿ ಸರ್ವಘ್ನನ ಪದಗಳ ಅಂದ ||೨||
ದಾಸರು ಶರಣರು ನಾಡಿಗೆ ನೀಡಿದ
ಭಕ್ತಿಯ ಗೀತೆಗಳ ಪರಮಾನಂದ
ರನ್ನನು ರಚಿಸಿದ ಹೊನ್ನಿನ ನುಡಿಯು
ಪಂಪನು ಹಾಡಿದ ಚಿನ್ನದ ನುಡಿಯು
ಕನ್ನಡ ತಾಯಿಯು ನೀಡಿದ ವರವು
ಸುಮಧುರ ಸುಂದರ ನುಡಿಯೊ

ಜೇನಿನ ಹೊಳೆಯೊ ಹಾಲಿನ ಮಳೆಯೊ
ಸುಧೆಯೊ ಕನ್ನಡ ಸವಿ ನುಡಿಯೊ
ವಾಣಿಯ ವೀಣೆಯ ಸ್ವರಮಧುರ್ಯವೋ
ಸುಮಧುರ ಸುಂದರ ನುಡಿಯೊ

ಜೇನಿನ ಹೊಳೆಯೊ ಹಾಲಿನ ಮಳೆಯೊ
ಸುಧೆಯೊ ಕನ್ನಡ ಸವಿ ನುಡಿಯೊ
ಸುಧೆಯೊ ಕನ್ನಡ ಸವಿ ನುಡಿಯೊ



ಹೇಳಬೇಕೆಂದುಕೊಂಡದ್ದೆಲ್ಲ ಚಿ. ಉದಯಶಂಕರ್ ಅವರು ಅದಾಗಲೇ ಹೇಳಿ ಬಿಟ್ಟಿದ್ದಾರಲ್ಲ. ಇದಕ್ಕಿಂತಲೂ ಹೆಚ್ಚಿಗೆ ನಾನು ಇನ್ನೇನು ತಾನೇ ಹೇಳಲಿ ?